ಅಂಕಣಗಳು

ಬೆಳ್ತಂಗಡಿ ತಾಲೂಕಿನಲ್ಲಿ ಮೂಡಬೇಕಿದೆ ಹೊಸ ನಕ್ಷತ್ರ..!! ಬಾನಂಗಲದಲ್ಲಿ ಮಿನುಗಲಿ ಹರೀಶ್ ಪೂಂಜಾ.. ಸಮರ್ಥ ನಾಯಕನ ಜವಾಬ್ದಾರಿ ಹೊರಲು ಸಿದ್ಧವಾಗಿರುವ ಯುವ ನಾಯಕನ ಕಿರು ಚಿತ್ರಣಕ್ಕಾಗಿ ಈ ಅಂಕಣ ಓದಿ…!!

ಬೆಳ್ತಂಗಡಿ ತಾಲೂಕು ದ ಕ ಜಿಲ್ಲೆಯಲ್ಲಿ ಸ್ವಲ್ಪ ಭಿನ್ನವಾಗಿ ಗುರುತಿಸಿಕೊಳ್ಳುವ ತಾಲ್ಲೂಕುಗಳಲ್ಲಿ ಒಂದು. ಯಾವುದೇ ರಾಜಕೀಯ ಅಥವಾ ರಾಜಕೀಯೇತರ ಸಮಸ್ಯೆಗಳು ಉದ್ಭವಿಸಿದಾಗ ಹೋರಾಟದ ಮೂಲಕವೇ ಅದಕ್ಕೊಂದು ಉತ್ತರ ಪಡೆಯುವ ಬಗೆ ಇಲ್ಲಿನ ನಾಗರೀಕರಿಗೆ ಸಿದ್ದಿಸಿದ ಕಲೆ. ಯಾರದೇ ತಪ್ಪು ಕಂಡಾಗ ಅದನ್ನು ಬೆಟ್ಟು ಮಾಡಿ ತೋರಿಸುವ ಗುಣ ಹೊಂದಿರುವ ಇಲ್ಲಿನ ಜನ, ಇಷ್ಟವಾದ ಯಾರನ್ನೇ ಆಗಲಿ ಮರೆತು ಕೃತಘ್ನರಾದ ಉದಾಹರಣೆಗಳೇ ಇಲ್ಲ. ಬೇರೆಲ್ಲಾ ತಾಲ್ಲೂಕುಗಳಿಗಿಂತ ಬಹುತೇಕ ವಿಸ್ತಾರವಾಗಿದ್ದಾಗ್ಯೂ, ಎಲ್ಲಾ ಧರ್ಮದ ಜನರಿದ್ದರೂ ಎಲ್ಲರೂ ಒಂದಾಗಿ ಶಾಂತಿಯಿಂದ ಸಹಬಾಳ್ವೆ ಎಂಬ ಮಾತನ್ನು ಪಾಲಿಸಿಕೊಂಡು ಬಂದವರು. ಕೋಮುಗಲಭೆಯಾಗಲಿ ಅಥವಾ ಧಾರ್ಮಿಕ ಯುದ್ಧ ಆಗಲಿ ಇಲ್ಲಿ ಗೋಚರಿಸಿದ್ದೇ ಇಲ್ಲ. ಎಲ್ಲಾ ಧರ್ಮದ ಜನರು ಒಬ್ಬರಿಗೊಬ್ಬರು ಸಮಾನರು ಎಂಬ ಮಾತನ್ನು ಒಪ್ಪಿಕೊಂಡು ಶಾಂತಿಯುತ ಜೀವನ ಸಾಗಿಸುತ್ತಿದ್ದಾರೆ ಎಂದರೆ ತಪ್ಪಲ್ಲ.

ಇಂತಹ ತಾಲ್ಲೂಕಿನ ಚುನಾವಣಾ ವಿಚಾರಕ್ಕೆ ಬರುವುದಾದರೆ ಇಲ್ಲಿ ಅತಿ ಹೆಚ್ಚು ಬಿಲ್ಲವ ಸಮಾಜಕ್ಕೆ ಸೇರಿದ ಜನರಿದ್ದಾರೆ. ಹಾಗಾಗಿ ಅತಿ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದ ಶಾಸಕರು ಬಿಲ್ಲವ ಸಮುದಾಯದವರೇ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ ವಸಂತ ಬಂಗೇರ ಕೂಡ ಬಿಲ್ಲವ ಸಮುದಾಯದವರು ಎನ್ನುವುದು ಇಲ್ಲಿ ಬಿಲ್ಲವ ಸಮುದಾಯದ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ. ವಸಂತ ಬಂಗೇರ ಅವರು ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಅನ್ನುವುದಕ್ಕಿಂತ ಅವರಿಗೊಬ್ಬ ಪ್ರಬಲ ಪ್ರತಿಸ್ಪರ್ಧಿಯ ಕೊರತೆ ಇತ್ತು ಎಂಬ ಮಾತು ಕೂಡ ಅಷ್ಟೇ ಸತ್ಯ. ಬಹುಪಾಲು ಬಿಲ್ಲವ ಸಮುದಾಯ ಜೊತೆಗಿದ್ದು ಗೆಲುವು ಸರಳವಾಗಿದೆ ಅನ್ನುವುದು ನಿಜವಾದರೂ ಶಾಸಕನಾಗಿ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗೆ ಸ್ವಲ್ಪ ಮಟ್ಟಿನ ಶ್ರಮ ಪಡಲಿಲ್ಲ ಅನ್ನೋ ಬೇಸರದ ನುಡಿ ಸ್ವತಃ ಬಿಲ್ಲವ ಸಮುದಾಯದವರ ಬಾಯಲ್ಲೇ ಕೇಳಿ ಬರುತ್ತಿದೆ. ಹಲವು ಬಾರಿ ಶಾಸಕನಾದರೂ ಒಮ್ಮೆಯೂ ಕೂಡ ಸಚಿವರಾಗದ ಕಾರಣ ವಸಂತ ಬಂಗೇರ ಅವರ ವರ್ಚಸ್ಸು ಮರೆಯಾಗಿರುವುದಂತೂ ಸುಳ್ಳಲ್ಲ. ಸಹಜವಾಗಿಯೇ ಬೆಳ್ತಂಗಡಿ ತಾಲೂಕಿಗೆ ಹೊಸಮುಖದ ಅನಿವಾರ್ಯತೆ ಕಂಡು ಹುಡುಕ ಹೊರಟ ಜನಸಾಮಾನ್ಯರಿಗೆ ಸದ್ಯ ಮರುಭೂಮಿಯಲ್ಲಿ ಓಯಸಿಸ್ ನಂತೆ ಕಂಡು ಬಂದಿರುವ ಹೆಸರು ಹರೀಶ್ ಪೂಂಜಾ..

ಹರೀಶ್ ಪೂಂಜಾ… ಸದ್ಯ ಬೆಳ್ತಂಗಡಿ ತಾಲೂಕಿನ ಯುವಕರ ನಾಡಿ ಮಿಡಿತದಲ್ಲಿ ತುಂಬಿಕೊಂಡ ಹೆಸರು. ಗರ್ಡಾಡಿಯ ಮುತ್ತಣ್ಣ ಪೂಂಜಾ ಹಾಗೂ ನಳಿನಿ ಪೂಂಜಾ ದಂಪತಿಗಳ ಸುಪುತ್ರರಾಗಿರುವ ಹರೀಶ್ ಪೂಂಜಾ ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು. ಆರ್ ಎಸ್‌ ಎಸ್ ನ ಸಿದ್ಧಾಂತಗಳನ್ನು ಪಾಲಿಸುತ್ತಾ ಬಂದ ಹರೀಶ್ ಪೂಂಜಾ 2001ರಿಂದ 2007 ರವರೆಗೆ ಕರಾವಳಿಯ ವಿದ್ಯಾರ್ಥಿ ಆಂದೋಲನವನ್ನು ಮುನ್ನಡೆಸಿದ ಸಾರಥಿ. ತನ್ನ ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಎಬಿವಿಪಿ ಯ ನಗರ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯಕಾರಿಣಿಯ ಸದಸ್ಯರಾಗಿ, ದ ಕ ಜಿಲ್ಲಾ ಸಂಚಾಲಕರಾಗಿ, ಕರ್ನಾಟಕ ರಾಜ್ಯ ಸಹ ಕಾರ್ಯದರ್ಶಿಯಾಗಿ ಗುರುತಿಸಿಕೊಂಡವರು. ನಾಯಕತ್ವದ ಗುಣಗಳನ್ನು ಹೊಂದಿದ್ದ ಹರೀಶ್ ಪೂಂಜಾ ಎಬಿವಿಪಿ ಬೆಳಗಾವಿ ನಗರ ಸಂಘಟನಾ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾದವರು. ಮುಂದೆ ಹೈಕೋರ್ಟ್ ನ ವಕೀಲರಾಗಿ ಸೇವೆ ಸಲ್ಲಿಸಿದರೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಏಕೈಕ ಉದ್ದೇಶದಿಂದ ರಾಜಕೀಯ ಜೀವನ ಪ್ರವೇಶಿಸಿದರು. ಆರ್ ಎಸ್ ಎಸ್‌ ನ ನೆರಳಲ್ಲಿ ಬೆಳೆದ ಪರಿಣಾಮವಾಗಿ ಬಿಜೆಪಿ ಸೇರಿದ ಹರೀಶ್ ಪೂಂಜಾ ಪಕ್ಷದ ಯಶಸ್ಸಿಗಾಗಿ ದುಡಿದರು. ಅವರ ಈ ಸೇವೆಗಾಗಿಯೇ ಪಕ್ಷವು ದ ಕ ಜಿಲ್ಲೆಯಲ್ಲಿ ಯುವಕರನ್ನು ಒಗ್ಗೂಡಿಸುವ ಸಲುವಾಗಿ ದ ಕ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆ ಮಾಡಿತು. ಮುಂದೆ ನಡೆದದ್ದೆಲ್ಲ ಇತಿಹಾಸ. ದಕ ಜಿಲ್ಲೆಯ ಎಲ್ಲಾ ಹಿರಿಯ ರಾಜಕಾರಣಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನ ದೊಂದಿಗೆ ದಕ ಜಿಲ್ಲೆಯಾದ್ಯಂತ ಯುವಕರನ್ನು ಬಿಜೆಪಿಗೆ ಸೆಳೆದ ಪರಿ ವರ್ಣನಾತೀತ.

ಬಹುಶಃ ಸಂಘಟನಾ ಚತುರತೆ ಹರೀಶ್ ಪೂಂಜಾರಿಗೆ ಇರುವಷ್ಟು ಬೇರೆ ಯಾರಲ್ಲೂ ಕೂಡ ಕಾಣಸಿಗಲಿಕ್ಕಿಲ್ಲ. ಧಾರ್ಮಿಕ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿ, ಬ್ರಹ್ಮ ಕಲಶೋತ್ಸವ ಸಮಿತಿಗಳಲ್ಲಿ ಮುಂದಾಳುವಾಗಿ ಸ್ವತಃ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಹರೀಶ್ ಪೂಂಜಾ ಜನಸಾಮಾನ್ಯರಲ್ಲಿ ಸಾಮಾನ್ಯನಾಗಿ ಗುರುತಿಸಿಕೊಂಡವರು. ಎಲ್ಲರಲ್ಲೂ ಬೆರೆಯುವ ಗುಣ ಹುಟ್ಟುತ್ತಲೇ ರಕ್ತಗತವಾಗಿ ಬಂದಿರಬಹುದೇನೋ ಅನ್ನಿಸುವಷ್ಟು ವಿನಯವಂತನಾಗಿರುವುದು ಹರೀಶ್ ಪೂಂಜಾ ಅವರ ಹೆಗ್ಗಳಿಕೆ. ಯಾವುದೇ ಕಾರ್ಯಕ್ರಮವಿರಲಿ ಹರೀಶ್ ಅಣ್ಣ ನೀವು ಬನ್ನಿ ಎಂದು ಯಾರೇ ಕರೆದರೂ ಅಲ್ಲಿ ಹಾಜರಾಗುವ ಹರೀಶ್ ಪೂಂಜಾ ಯುವಕರೊಂದಿಗೆ ಒಂದಾಗುವ ಪರಿ ಬಣ್ಣಿಸಲೂ ಸಾಧ್ಯವಿಲ್ಲ‌. ದಿನದ ಪ್ರತಿ ಸಮಯವನ್ನು ಕೂಡ ಸಾಮಾಜಿಕ ಜೀವನಕ್ಕೆ ಮುಡುಪಿಟ್ಟ ಹರೀಶ್ ಪೂಂಜಾ ಅವರದು ಮೇರು ವ್ಯಕ್ತಿತ್ವ ಎಂದರೆ ಅತಿಶಯೋಕ್ತಿಯಲ್ಲ‌. ಇಂತಹ ವ್ಯಕ್ತಿ ನಮ್ಮ ಶಾಸಕನಾಗಲಿ ಎಂದು ಬಯಸಿದರೆ ಅದರಲ್ಲಿ ತಪ್ಪೇನಿದೆ…???

ಹೇಳಿಕೇಳಿ ಬೆಳ್ತಂಗಡಿ ತಾಲೂಕು ಜನರಂದುಕೊಂಡಷ್ಟು ಅಭಿವೃದ್ಧಿ ಹೊಂದಿಲ್ಲ, ಸಮಸ್ಯೆಗಳ ಸರಮಾಲೆಯನ್ನೇ ಹೊಂದಿರುವ ತಾಲ್ಲೂಕುಗಳಲ್ಲಿ ಬೆಳ್ತಂಗಡಿ ಕೂಡ ಒಂದು. ಮುಖ್ಯವಾಗಿ ರಸ್ತೆಯ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಸುಸಜ್ಜಿತ ಆಸ್ಪತ್ರೆ ಇಲ್ಲದೆ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ದೂರದ ಮಂಗಳೂರನ್ನೇ ಅವಲಂಬಿಸಬೇಕಾದ ಸ್ಥಿತಿ, ಬಹುಕಾಲದ ಬೇಡಿಕೆಯ ಅಂಡಿಂಜೆ – ಫಂಡಿಜೆ ನಡುವಿನ ತೂಗುಸೇತುವೆಯನ್ನು ಸೇತುವೆಯಾಗಿ ಪರಿವರ್ತಿಸಲಾಗದೆ ಹಾಗೆಯೇ ಉಳಿದಿರುವುದು, ಕೊಕ್ರಾಡಿ – ಕುತ್ಲೂರು ನಡುವಿನ ಜೋಡಣೆ ರಸ್ತೆ ದುರಸ್ತಿಯಾಗದೆ ಹಾಗೇ ಇರುವುದು, ಬೆಳ್ತಂಗಡಿ ಹೃದಯ ಭಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವುದು ಇವೆಲ್ಲ ಕೇವಲ ಉದಾಹರಣೆಗಳಷ್ಟೇ. ಇಂತಯ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯ ಆಗಬೇಕಿದೆ. ಹಲವು ಬಾರಿ ಶಾಸಕರಾದವರೂ ಕೂಡ ಯಾವುದೇ ಕಾಳಜಿ ವಹಿಸದೇ ಇರುವುದರಿಂದ ಜನಸಾಮಾನ್ಯರ ಕೂಗು ಅರ್ಥೈಸಿಕೊಳ್ಳುವ ಜನನಾಯಕನ ಅಗತ್ಯ ಬೆಳ್ತಂಗಡಿ ತಾಲೂಕಿಗಿದೆ.

ಹರೀಶ್ ಪೂಂಜಾ ಅವರು ವಿದ್ಯಾರ್ಥಿ ಆಗಿದ್ದ ಸಮಯದಿಂದ ಇಲ್ಲಿಯವರೆಗೆ ಬೆಳೆದು ಬಂದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ
ಅವರೊಬ್ಬ ಸಮಾಜಮುಖಿ ಚಿಂತನೆ ಹೊಂದಿರುವ ವಿಭಿನ್ನ ಮನೋಭಾವದ, ನೈಜ ನಾಯಕತ್ವದ ಗುಣ ಹೊಂದಿರುವ ವ್ಯಕ್ತಿಯಾಗಿ ಕಾಣಿಸುತ್ತಾರೆ. ಹೋರಾಟದ ಗುಣವನ್ನೇ ಮೈತುಂಬಿಕೊಂಡು ಯುವ ನಾಯಕನಾಗಿ ಗುರುತಿಸಿಕೊಂಡಿರುವ ಹರೀಶ್ ಪೂಂಜಾ ಯಾವುದೇ ಸಮಯದಲ್ಲೂ ಕಂಗೆಡದ ಸಿಡಿಗುಂಡಿನಂತೆ ಭಾಸವಾಗುತ್ತಾರೆ.

ಪ್ರತಾಪ್ ಸಿಂಹ ಅವರನ್ನು ಬಂಧಿಸಿದ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಅವರು ತೋರಿದ ಎದೆಗಾರಿಕೆ, ಭಾರತ ದೇಶ ನರಕ ಪಾಕಿಸ್ತಾನ ಸ್ವರ್ಗ ಎಂದ ನಟಿ ರಮ್ಯಾ ಅವರ ಮಂಗಳೂರು ಭೇಟಿಯ ಸಂದರ್ಭದಲ್ಲಿ ಮೊಟ್ಟೆ ಎಸೆದು ಪ್ರತಿಭಟಿಸಿದ ಆ ಧೈರ್ಯ, ಹತ್ತು ಹಲವು ದೇವಾಲಯಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶದ ವೇಳೆ ಮುಂಚೂಣಿಯಲ್ಲಿ ನಿಂತು ಕಾರ್ಯಕ್ರಮ ಯಶಸ್ವಿಗೊಳಿಸಿದ ಧಾರ್ಮಿಕ ಶ್ರದ್ಧೆ, ಪುತ್ತೂರಿನಲ್ಲಿ ನಡೆದ ಹಿಂದೂ ಹೃದಯ ಸಂಗಮಕ್ಕಾಗಿ ಹಾಗೂ ಉಳ್ಳಾಲದಿಂದ ಮಂಗಳೂರಿನವರೆಗೆ ನಡೆದ ತಿರಂಗ ಯಾತ್ರೆ ಹಾಗೂ ಬೆಳ್ತಂಗಡಿಯಲ್ಲೇ ನಡೆಸಿದ ಕೃಷ್ಣೋತ್ಸವ ಸಂದರ್ಭ, ಇಡೀ ದ ಕ ಜಿಲ್ಲೆಯ ಯುವಕರನ್ನು ಸಂಘಟಿಸಿದ ಸಂಘಟನಾತ್ಮಕ ನಡೆ, ಎತ್ತಿನಹೊಳೆ ಹೋರಾಟದಲ್ಲಿ ಪ್ರದರ್ಶಿಸಿದ ನೆಲ ಜಲಕ್ಕಾಗಿನ ಹಠಮಾರಿ ನಿಲುವು, ಎಂಡೋಸಲ್ಫಾನ್ ಪೀಡಿತರ ನೋವಿಗೆ ಧ್ವನಿಯಾಗಿ ಅಶಕ್ತರ ಬಗ್ಗೆ ತೋರಿದ ಆ ಕಾಳಜಿ, ಯುವ ಜನಾಂಗವನ್ನು ಒಗ್ಗೂಡಿಸಿದ ಆ ಕ್ರಿಯಾಶೀಲತೆ ಹೀಗೆ ಎಲ್ಲಾ ವಿಭಾಗದಲ್ಲಿಯೂ ಒಬ್ಬ ಸಮರ್ಥ ನಾಯಕನಿಗೆ ಇರಬೇಕಾದ ಎಲ್ಲಾ ಅಂಶಗಳನ್ನು ಹೊಂದಿರುವ ಹರೀಶ್ ಪೂಂಜಾ ಬೆಳ್ತಂಗಡಿ ತಾಲೂಕಿನ ಹೊಸ ಬೆಳಕಾಗಿ ಗೋಚರಿಸಿದ್ದಾರೆ. ಬೊಗಳೆ ಮಾತು, ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ, ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ ಮತ ದೋಚುವ ಕಪಟ ರಾಜಕಾರಣಿಗಳ ಪೈಕಿ ವಿಭಿನ್ನವಾಗಿ ಗುರುತಿಸಿಕೊಳ್ಳುವ ನಾಯಕನ ಆಯ್ಕೆ ಬೆಳ್ತಂಗಡಿ ತಾಲೂಕಿನ ಜನರಿಂದ ಆಗಬೇಕಿದೆ, ತನ್ಮೂಲಕ ಕಿರಿಯ ವಯಸ್ಸಿನಲ್ಲೇ ರಾಜಕೀಯಕ್ಕೆ ಪ್ರವೇಶ ಪಡೆದಿರುವ ಹರೀಶ್ ಪೂಂಜಾ ರನ್ನು ಶಾಸಕನಾಗಿಸಿ, ರಾಜಕೀಯದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲು ಪ್ರೋತ್ಸಾಹಿಸಬೇಕಾಗಿದೆ‌.
ಅಭಿವೃದ್ಧಿ ಕುಂಠಿತಗೊಂಡಿರುವ ಬೆಳ್ತಂಗಡಿ ತಾಲೂಕಿನ ಚಿತ್ರಣ ಬದಲಿಸಲು, ನವ ಬೆಳ್ತಂಗಡಿ ತಾಲೂಕಿನ ನಿರ್ಮಾಣಕ್ಕೆ ನಾಂದಿ ಹಾಡಲು ಹರೀಶ್ ಪೂಂಜಾ ಆಯ್ಕೆ ಅನಿವಾರ್ಯವಾಗಿದೆ.

ಪ್ರತಿ ಬಾರಿ ತಮ್ಮ ಭಾಷಣದ ಕೊನೆಯಲ್ಲಿ ಬೋಲೋ ಭಾರತ್ ಮಾತಾ ಕಿ ಜೈ ಎಂದು ಸಭಿಕರಲ್ಲಿ ಜಯಘೋಷದ ಉದ್ಗಾರವನ್ನು ಗಟ್ಟಿಯಾಗಿ ಹೇಳಿಸುವ ಹರೀಶ್ ಪೂಂಜಾರಿಗೆ ಇದೀಗ ಬೆಳ್ತಂಗಡಿ ತಾಲೂಕೇ ಜೈ ಹೇಳುವ ಕಾಲ ಬಂದಿದೆ. ಹರೀಶ್ ಪೂಂಜಾ ಅವರಿಗೆ ಜೈ ಹೇಳೋಣ… ~ಪಚ್ಚು,ವೇಣೂರು(ಕೇಸರಿ ಕುವರ).

  • 1.2K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari